ನಾನು ಸ್ವಾಭಿಮಾನಿ
ತೊಗರಿ ಕಣಜವೆಂದೇ ಪ್ರಖಾತಿ ಹೊಂದಿರುವ ನನ್ನಲ್ಲಿ ಕರಿ ಮಣ್ಣಿನ ವಾಸನೆ ತುಂತುರ ಮಳೆಹನಿಇಂದ ಘಮಘಮಿಸುವ ವಿಶೇಷತೆ ನನಗಿಂತ ಇನ್ನಾವ ಮಣ್ಣಿನಲ್ಲೂ ಬಹುಶಃ ಇರದು . ಯಾವದೇ ಹುಚ್ಚು ಆಮಿಷಕ್ಕೆ ಒಳಗಾಗದೇ ನನ್ನ ಪರಿಧಿಯನ್ನು ಹಿಗ್ಗಾ -ಜಗ್ಗಡದೇ ಪರರಿಂದ ದೂಷಿಸದೇ ನನ್ನ ಪರಿಮಿತಿಯಲ್ಲಿ ನಾನಿರುವೆ . ಇದರ ಫಲವೇ ಇನ್ನೂ ನಾನು ತುಂಡು ಬಟ್ಟೆ ಮತ್ತು ಚಿಂದಿ -ಪಂದಿ ಉಡದೇ ಹಸಿರು ಪಯಿರಿನ ಸೀರೆಯನ್ನುಡುವ ಭಾಗ್ಯ ಇನ್ನೂ ನನ್ನಲ್ಲಿದೆ.ಹಾಂ! ನನ್ನ ರಕ್ಷಣೆಗೇನೂ ಕೊರತೆ ಇಲ್ಲ . ಗಟ್ಟಿಮುಟ್ಟಾದ ಕಲ್ಲು-ಗುಂಡುಗಳ ಪ್ರಾದೇಶಗಳೂ ನನ್ನ ರಷಣೆಗಿವೆ . ಸಾಕಷ್ಟು ಜಲರಾಶಿಯೂ ನನ್ನಿಂದ ಸುಳಿದಾಡುತ್ತಿವೆ. ಭೀಮ ,ಮುಲ್ಲಾಮಾರಿ, ಬೆಣ್ಣಿತೊರ ಎಂಬಂಥ ಜಲಕನ್ನೆಯರ ಲಲನೆಇಂದ ನನ್ನ ಶೃಂಗಾರ ದ್ವಿಗುಣವಾಗುಅದಲ್ಲದೆ ನನ್ನ ಜನ-ಜಾನುವಾರುಗಳಿಗೂ ದಾಹ ಇಂಗಿಸಿ ಪೋಷಿಸುವ ಸಾಮರ್ಥ್ಯ ನನ್ನಲ್ಲಿದೆ ಎಂದು ಹೆಮ್ಮೆಇಂದ ಹೇಳುವೆನು.
ನನ್ನ ಸೌಂದರ್ಯಕ್ಕೆ ದೃಷ್ಟಿ ಬೊಟ್ಟು ಎಂಬಂತೆ ಅಲ್ಲಲ್ಲಿ ಕಪ್ಪು ಹೊಗೆಯುಗುಳುವ ಚಿಕ್ಕ ಪುಟ್ಟ ಕಾರಖಾನೆ ಗಳೂ ನನ್ನಿಂದ ದೂರವಾಗಿಲ್ಲ . ಅವುಗಳ ಸಂಖ್ಯೆ ಹೆಚ್ಚಾಗದೇ ನನಗೆ ಅವುಗಳಿಂದ ಭಾರವಾಗದೆ, ವಾತಾವರಣ ಕಲುಶಿತ ಮಾಡದೆ ಹಾಗೂ ಜೀವಿಗಳ ಆರೋಗ್ಯ ಹಾಳು ಮಾಡಗೊಡದ ಸ್ವಾಭಿಮಾನಿ ನಾನು.
ನೀವೇ ಹೇಳಿ...,
ನನ್ನಲ್ಲಿ ಏನು ಕೊರತೆ? ಏಕೆ ನನ್ನನ್ನು ಹೀಗಳೆಯುತ್ತಾರೆ? ನಾನು ಸ್ವಾಭಿಮಾನಿಯಾದ ಮಾತ್ರಕ್ಕೆ ನನ್ನನ್ನು ನಿರ್ಲಕ್ಷ ಮಾಡುವ ಸರಕಾರದ ಮನೋಭಾವ ಸರಿಯೇ? ನನ್ನನ್ನು ಹಿಂದೆ ಕುಳಿತ ವಿದ್ಯಾರ್ಥಿಯಂತೆ ಕಡೆಗಣಿಸಿ ಸಕಲ ಸೌಲಭ್ಯಗಳಿಂದ ದೂರ ತಳ್ಳಿ, ಲೆಕ್ಕಕ್ಕುಂಟು-ಆಟಕ್ಕಿಲ್ಲ ಎಂಬಂತೆ ಕಡೆಗಣಿಸದೆ ಎಲ್ಲರನ್ನೂ ಸಮಾನವಾಗಿ ಪೋಷಿಸುವ ಹೊಣೆ ನಿಮ್ಮದಲ್ಲವೇ?
ಅಂದಹಾಗೆ, ಈ ಸ್ವಾಭಿಮಾನಿಯ ಪರಿಚಯ ನಿಮಗಿರಬಹುದು, ಆ ತೊಗರಿ ಕಣಜ,ಕರಿಮಣ್ಣಿನ ನೆಲವೇ ಕಲಬುರಗಿ ಪ್ರಾಂತ!